      ಮೂಲದೊಡನೆ  ಪರಿಶೀಲಿಸಿ

ಕೂಲಿ ಸಿದ್ಧಾಂತಗಳು

ಒಂದು ದೇಶದ ಉತ್ಪಾದನ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಕಾರ್ಮಿಕರಿಗೆ ಅವರ ದುಡಿಮೆಗೆ ಪ್ರತಿಫಲವಾಗಿ ಲಭ್ಯವಾಗುವ ಕೂಲಿಯ ಮಟ್ಟದ ನಿರ್ಣಯವನ್ನು ಕುರಿತ ಸಿದ್ಧಾಂತಗಳು (ತಿಯೋರೀಸ್ ಆಫ್ ವೇಜಸ್), 18ನೆಯ ಶತಮಾನದ ಮಧ್ಯಭಾಗದಿಂದಲೂ ಅರ್ಥಶಾಸ್ತ್ರಜ್ಞರು ಸಾರ್ವತ್ರಿಕವಾಗಿ ಅಂಗೀಕಾರಾರ್ಹವಾದ ಕೂಲಿ ಸಿದ್ಧಾಂತವೊಂದನ್ನು ರೂಪಿಸುವುದರಲ್ಲಿ ತೊಡಗಿದ್ದಾರಾದರೂ ಇದುವರೆಗೂ ಅವರು ಈ ದಿಕ್ಕಿನಲ್ಲಿ ಸಂಪೂರ್ಣ ಜಯಗಳಿಸಲಾಗಿಲ್ಲ. ಪ್ರಾಚೀನರಿಂದ ಹಿಡಿದು ಆಧುನಿಕರವರೆಗೆ ಅನೇಕ ಅರ್ಥಶಾಸ್ತ್ರಜ್ಞರು ತಂತಮ್ಮ ಕೂಲಿ ಸಿದ್ಧಾಂತಗಳನ್ನು ಮಂಡಿಸಿದ್ದಾರಾದರೂ ಒಂದೊಂದು ಸಿದ್ಧಾಂತವೂ ಈ ವಿಷಯದ ಒಂದೊಂದು ಮುಖವನ್ನು ಒತ್ತಿ ಹೇಳುತ್ತದೆ. ಯಾವ ಸಿದ್ಧಾಂತವೂ ಪರಿಪೂರ್ಣವಲ್ಲ.  ಅವೆಲ್ಲ ಒಂದಕ್ಕೊಂದು ಪೂರಕ.  ಸ್ವಾಭಾವಿಕ ಅಥವಾ ಮಾರುಕಟ್ಟೆಯ ಬಲಗಳಿಂದ, ಎಂದರೆ ಶ್ರಮದ ಬೇಡಿಕೆ ಮತ್ತು ಅದರ ಸರಬರಾಯಿಗಳ ಪರಸ್ಪರ ಕ್ರಿಯೆಯಿಂದ ಕಾರ್ಮಿಕರ ಕೂಲಿಯ ಮಟ್ಟದ ನಿರ್ಣಯವಾಗುವುದೆಂಬುದಾಗಿ 19ನೆಯ ಶತಮಾನದಲ್ಲೂ ಅದಕ್ಕೆ ಮುಂಚೆಯೂ ರೂಪಿತವಾದ ಕೂಲಿ ಸಿದ್ಧಾಂತಗಳು ಹೇಳಿದರೆ, ಸಾಂಸ್ಥಿಕ ಬಲಗಳಿಂದ ಮತ್ತು ಸಾಂಘಿಕ ಒತ್ತಡಗಳಿಂದ ಅಥವಾ ಸರ್ಕಾರದ ನಿರ್ದೇಶನಗಳಿಂದ ಕೂಲಿಯ ಮಟ್ಟದ ನಿರ್ಣಯವಾಗುವುದೆಂದು 20ನೆಯ ಶತಮಾನದ ಸಿದ್ಧಾಂತಗಳು ಹೇಳುತ್ತವೆ.

ಐತಿಹಾಸಿಕವಾಗಿ ಕೂಲಿ ಸಿದ್ಧಾಂತಗಳನ್ನು ನಾಲ್ಕು ಬಗೆಯಾಗಿ ವಿಂಗಡಿಸಬಹುದು: (1) 18ನೆಯ ಶತಮಾನದ ಉತ್ತರಾರ್ಧದಲ್ಲಿ ಪ್ರಚುರವಾಗಿದ್ದ ಜೀವನ ನಿರ್ವಾಹಸಿದ್ಧಾಂತ (ಸಬ್ಸಿಸ್ಟೆನ್ಸ್ ತಿಯೊರಿ), (2)19ನೆಯ ಶತಮಾನದ ಪೂರ್ವಾರ್ಧ ಮತ್ತು ಮಧ್ಯ ಕಾಲದಲ್ಲಿ ಬಂದ ಕೂಲಿ ಸಿದ್ಧಾಂತ (ವೇಜ್ ಫಂಡ್ ತಿಯೊರಿ), (3) 19ನೆಯ ಶತಮಾನದ ಕೊನೆಯ ಭಾಗ ಮತ್ತು 20ನೆಯ ಶತಮಾನದ ಆದಿಭಾಗದಲ್ಲಿ ಪ್ರತಿಪಾದಿತವಾದ ಸಿದ್ಧಾಂತ ಉತ್ಪಾದಕತೆ ಸಿದ್ಧಾಂತ(ಮಾರ್ಜಿನಲ್ ಪ್ರೊಡಕ್ಟಿವಿಟಿ ತಿಯೊರಿ) ಮತ್ತು(4) 20ನೆಯ ಶತಮಾನದ ಸಾಮೂಹಿಕ ಚೌಕಾಸಿ ಸಿದ್ಧಾಂತಗಳು (ಬಾರ್ಗೇನಿಂಗ್ ತಿಯೊರೀಸ್).

ಜೀವನನಿರ್ವಾಹ ಸಿದ್ಧಾಂತ

ಫ್ರಾನ್ಸಿನ ಪ್ರಕೃತಿಪ್ರಾಧಾನ್ಯವಾದಿಗಳ (ಫಿಸಿಯೋಕ್ರ್ಯಾಟ್ಸ್) ಪಂಥಕ್ಕೆ ಸೇರಿದ ಟುರ್ಗೋ(1727-1781) ಮತ್ತು ಕೆನೇ(1694-1774) ಇವರು ಈ ಸಿದ್ಧಾಂತದ ಪ್ರಥಮ ಪ್ರತಿಪಾದಕರು.  ಈ ಸಿದ್ಧಾಂತವನ್ನು ಉತ್ತರೋತ್ತರ ಪರಿಷ್ಕರಿಸಿದವರಲ್ಲಿ ಮುಖ್ಯರಾದವರು ಆಡಂ ಸ್ಮಿತ್ (1723-1790), ಮ್ಯಾಲಸ್ (1766-1834), ರಿಕಾರ್ಡೋ (1772-1823), ಟಾರೆನ್ಸ್ (1821) ಮತ್ತು ಕಾರ್ಲ್ ಮಾಕ್ರ್ಸ್ (1818-1883).  ಇದು ಮುಖ್ಯವಾಗಿ ಶ್ರಮದ ಸರಬರಾಯಿಯ ಸಿದ್ಧಾಂತ.  ಕಾರ್ಮಿಕ ಮತ್ತು ಅವನ ಕುಟುಂಬದ ಕನಿಷ್ಠ ಜೀವನ ನಿರ್ವಹಣಕ್ಕೆ ಅವಶ್ಯವಾದ ಮಟ್ಟದಲ್ಲಿ ಕೂಲಿ ನೆಲೆಗೊಳ್ಳುವ ಪ್ರವೃತ್ತಿ ತೋರಿಸುತ್ತದೆಯೆಂಬುದು ಇದರ ಮುಖ್ಯ ವಾದ. ಜನಸಂಖ್ಯೆಯ ಪ್ರವೃತ್ತಿಗಳು, ಕಾರ್ಮಿಕ ಬಲದ ಪ್ರತಿಸ್ಥಾಪನ ವೆಚ್ಚ - ಇವು ಕೂಲಿಯನ್ನು ನಿರ್ಣಯಿಸುವ ಮುಖ್ಯ ಅಂಶಗಳು.  ಆಹಾರ ಪದಾರ್ಥಗಳಿಗಿಂತ ಹೆಚ್ಚು ವೇಗವಾಗಿ ಬೆಳೆಯುವುದು ಜನಸಂಖ್ಯೆಯ ಪ್ರವೃತ್ತಿಯಾಗಿರುವುದರಿಂದ, ಹೆಚ್ಚು ಸಂಖ್ಯೆಯ ಜನರು ಜೀವನ ನಿರ್ವಾಹದ ಮಟ್ಟದಲ್ಲೇ ಇರುತ್ತಾರೆ.  ರಿಕಾರ್ಡೋ ಪ್ರತಿಪಾದಿಸಿದ ಸಿದ್ಧಾಂತದಲ್ಲಿ ಸಹಜ ಕೂಲಿ (ನ್ಯಾಚುರಲ್ ವೇಜ್) ಮತ್ತು ಮಾರುಕಟ್ಟೆಯ ಕೂಲಿ (ಮಾರ್ಕೆಟ್ ವೇಜ್) ಎಂಬ ಶಬ್ದಗಳನ್ನು ಬಳಸಿದ್ದಾನೆ.  ಜೀವನನಿರ್ವಾಹ ಮಟ್ಟಕ್ಕೆ ಸಮನಾಗಿರತಕ್ಕದ್ದು ಸಹಜ ಕೂಲಿ.  ಕಾರ್ಮಿಕರಿಗೆ ಕೊಡುವ ಕೂಲಿ ಅಥವಾ ಮಾರುಕಟ್ಟೆಯ ಕೂಲಿ ಸಹಜ ಕೂಲಿಯ ಮಟ್ಟಕ್ಕಿಂತ ಹೆಚ್ಚಾದಾಗ, ಕಾರ್ಮಿಕರು ಹೆಚ್ಚಾಗಿ ಮದುವೆಯಾಗಿ ಕುಟುಂಬವನ್ನು ಬೆಳೆಸಲು ಉದ್ಯುಕ್ತರಾಗುತ್ತಾರೆ.  ಇದರಿಂದ ಕಾರ್ಮಿಕರ ಸರಬರಾಯಿ ಅಧಿಕವಾಗುತ್ತದೆ.  ಇದರಿಂದ ಕೂಲಿಯ ದರ ಮತ್ತೆ ಜೀವನ ನಿರ್ವಾಹ ಮಟ್ಟಕ್ಕೆ ಇಳಿಯುತ್ತದೆ. ಜೀವನನಿರ್ವಾಹ ಕೂಲಿಯ ಮಟ್ಟಕ್ಕಿಂತ ಮಾರುಕಟ್ಟೆಯ ಕೂಲಿ ಕಡಿಮೆಯಾದಾಗ ಕಾರ್ಮಿಕರು ಮದುವೆಯಾಗಲೂ ಮಕ್ಕಳನ್ನು ಪಡೆಯಲೂ ಹಿಂಜರಿಯುತ್ತಾರೆ.  ಅಲ್ಲದೆ ಕಡಿಮೆ ಕೂಲಿಯಿಂದಾಗಿ ಅವರ ಪೋಷಣೆ ಅಸಮರ್ಪಕವಾಗುತ್ತದೆ.  ಅವರಲ್ಲಿ ಮರಣಸಂಖ್ಯೆ ಏರುತ್ತದೆ.  ಕಾರ್ಮಿಕರ ಸರಬರಾಯಿ ತಗ್ಗುತ್ತದೆ.  ಮಾರುಕಟ್ಟೆಯ ಕೂಲಿ ದರ ಮತ್ತೆ ಜೀವನ ನಿರ್ವಾಹ ಮಟ್ಟಕ್ಕೆ (ಸಹಜ ಮಟ್ಟಕ್ಕೆ) ಏರುತ್ತದೆ.

ಜೀವನನಿರ್ವಾಹ ಸಿದ್ಧಾಂತ ಅತ್ಯಂತ ನಿರಾಶಾಪೂರಿತವಾದ್ದೆಂಬ ಟೀಕೆಗೆ ಒಳಗಾಗಿದೆ. ಯೂರೋಪಿನ ಇತಿಹಾಸದಲ್ಲಿ ಇದಕ್ಕೆ ಸಮರ್ಥನೆಯಾಗಿ ಅನೇಕ ಘಟನೆಗಳು ಜರುಗಿದುವು.  ಕರಾಳ ಮೃತ್ಯು ಎಂದು ಕುಖ್ಯಾತಿ ಗಳಿಸಿರುವ ಮಹಾಪ್ಲೇಗು ಜಾಡ್ಯದಿಂದ ಯೂರೋಪಿನಲ್ಲಿ ಅನೇಕರು ಮೃತ್ಯುವಶರಾದ ಮೇಲೆ ಸರಬರಾಯಿ ಕಡಿಮೆಯಾಗಿ ಕಾರ್ಮಿಕರ ಕೂಲಿಯ ಮಟ್ಟ ಏರಿತ್ತು.  19ನೆಯ ಶತಮಾನದ ವೇಳೆಗೆ ಅವರ ಸಂಖ್ಯೆ ಅಧಿಕವಾಯಿತು.  ಕೂಲಿಯ ಮಟ್ಟ ಮತ್ತೆ ಜೀವನನಿರ್ವಾಹ ಮಟ್ಟಕ್ಕೆ ಕುಸಿಯಿತು.  ಮ್ಯಾಲ್ಥಸನ ಜನಸಂಖ್ಯಾ ಸಿದ್ಧಾಂತವನ್ನವಲಂಬಿಸಿದ್ದ ಈ ಸಿದ್ಧಾಂತ ಬಹುವಾಗಿ ನಿರಾಶೆಗೆ ಎಡೆಗೊಟ್ಟಿತು.  ಕಾರ್ಮಿಕರಿಗೆ ಹೆಚ್ಚು ಕೂಲಿ ಕೊಡುವುದು ಅಪಾಯಕರವೆಂಬ ವಾದದಿಂದ ಅವರು ಬಹಳ ಮಟ್ಟಿಗೆ ಶೋಷಣೆಗೆ ಒಳಗಾದರು.  ಕಾರ್ಲ್ ಮಾಕ್ರ್ಸ್ ಪ್ರತಿಪಾದಿಸಿದ ಶೋಷಣೆಯ ಸಿದ್ಧಾಂತಕ್ಕೆ ಇದೇ ಆಧಾರವಾಯಿತು. 

ಜೀವನನಿರ್ವಾಹ ಕೂಲಿ ಸಿದ್ಧಾಂತದಲ್ಲಿ ಕ್ರಮೇಣ ಶೈಥಿಲ್ಯವುಂಟಾಯಿತು. ಅದರ ಪ್ರತಿಪಾದಕರಲ್ಲಿ ಕೊನೆಯವರಾದ ಟಾರೆನ್ಸ್, ಮಿಲ್ ಮುಂತಾದವರು ತಮ್ಮ ಪರಿಷ್ಕøತ ಸಿದ್ಧಾಂತದಲ್ಲಿ ಕೆಲವು ಮಾರ್ಪಾಟುಗಳ ಅಗತ್ಯವನ್ನು ಒಪ್ಪಿಕೊಂಡರು.  ಇಂಗ್ಲೆಂಡ್, ಫ್ರಾನ್ಸ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಂಥ ಮುಂದುವರಿದ ದೇಶಗಳಲ್ಲಿ ಜೀವನಮಟ್ಟ ಜೀವನನಿರ್ವಾಹ ಮಟ್ಟಕ್ಕಿಂತ ಸಾಕಷ್ಟು ಹೆಚ್ಚಾಗಿರುವುದಲ್ಲದೆ ಅದು ಇನ್ನೂ ಕ್ರಮಕ್ರಮವಾಗಿ ಹೆಚ್ಚುತ್ತಿರುವುದನ್ನು ಮಿಲ್ ಗುರುತಿಸಿದ್ದಾನೆ.  ಕೂಲಿ ಹೆಚ್ಚಿದಂತೆ ಜನನ ದರವೂ ಏರುವುದೆಂಬುದು ಇಲ್ಲಿ ಸುಳ್ಳಾಗಿದೆ. ಇಡೀ ಕಾರ್ಮಿಕವರ್ಗದ ಜೀವನ ನಿರ್ವಾಹ ಮಟ್ಟ ಸಾಮಾನ್ಯವಾಗಿ ಒಂದೇ ಆಗಿರುತ್ತದೆಯೆನ್ನುವುದೂ ಸರಿಯಲ್ಲ. ಬೇರೆ ಬೇರೆ ಉದ್ಯೋಗಗಳಲ್ಲಿ ಇದು ವ್ಯತ್ಯಾಸವಾಗುತ್ತದೆ.  ಜೀವನನಿರ್ವಾಹ ಮಟ್ಟವೆಂಬುದೇ ಬಹಳ ಅಸ್ಪಷ್ಟವಾದ್ದು.  ಎಲ್ಲ ದೇಶಗಳಿಗೂ ಎಲ್ಲ ಕಾಲಗಳಿಗೂ ಎಲ್ಲ ಸ್ಥಳಗಳಿಗೂ ಎಲ್ಲ ವರ್ಗಗಳಿಗೂ ಸಾಮಾನ್ಯವಾದ ಜೀವನ ನಿರ್ವಾಹ ಮಟ್ಟವೊಂದು ಉಂಟೆಂಬ ಭಾವನೆಯೇ ಅವಾಸ್ತವಿಕ. ಅಲ್ಲದೆ ಜೀವನನಿರ್ವಾಹ ಸಿದ್ಧಾಂತದಲ್ಲಿ ಕಾರ್ಮಿಕರ ಸರಬರಾಯಿಗೆ ಅನುಗುಣವಾಗಿ ಕೂಲಿ ವ್ಯತ್ಯಾಸವಾಗುವುದೆಂದು ಹೇಳಿದೆಯಾದರೂ ಶ್ರಮದ ಬೇಡಿಕೆಯ ಮುಖವನ್ನು ಪರಿಗಣಿಸಿಯೇ ಇಲ್ಲ.  ಕಾರ್ಮಿಕರನ್ನು ನೇಮಿಸಿಕೊಳ್ಳುವವರು ಅವರ ದುಡಿಮೆಯಿಂದ ತಮಗೆ ದೊರಕುವ ಲಾಭದ ಬದಲು, ಕಾರ್ಮಿಕಜೀವನ ನಿರ್ವಾಹವನ್ನೇ ಪರಿಗಣಿಸಿ, ಕೂಲಿ ಪಾವತಿ ಮಾಡುವರೆಂಬುದು ಅಷ್ಟೊಂದು ಸಮಂಜಸವಾದ ವಿವರಣೆಯಾಗುವುದಿಲ್ಲ. ಜೀವನನಿರ್ವಾಹ ಸಿದ್ಧಾಂತ ದೀರ್ಘಕಾಲದ ಬದಲಾವಣೆಗಳನ್ನು ವಿವೇಚಿಸಬಹುದಾದರೂ ವರ್ಷೇ ವರ್ಷೇ ಸಂಭವಿಸುವ ಬದಲಾವಣೆಗಳನ್ನು ಇದು ಕಡೆಗಣಿಸುತ್ತದೆ.

ಶೋಷಣೆಯ ಸಿದ್ಧಾಂತ

ಜೀವನನಿರ್ವಾಹ ಸಿದ್ಧಾಂತದ ವಾದವನ್ನೇ ಮುಂದುವರಿಸಿ ಕಾರ್ಲ್ ಮಾಕ್ರ್ಸ್ ತನ್ನ ಪ್ರಸಿದ್ಧವಾದ ಶೋಷಣೆಯ ಸಿದ್ಧಾಂತವನ್ನು ಪ್ರತಿಪಾದಿಸಿದ.  ಕಾರ್ಮಿಕರ ಶ್ರಮವನ್ನೂ ಒಂದು ಪದಾರ್ಥವೆಂದು ಬಗೆದು ಅದರ ಬೆಲೆಯನ್ನು ಕಟ್ಟುವ ವಿಧಾನವನ್ನು ಅವನು ತಳ್ಳಿಹಾಕಿದ.  ಕಾರ್ಮಿಕನ ಶ್ರಮದಿಂದ ಪದಾರ್ಥದ ಉತ್ಪಾದನೆಯಾಗುತ್ತದೆ.  ಆದ್ದರಿಂದ ಅದರ ಪ್ರತಿಫಲ ಹೋಗಬೇಕಾದ್ದು ಕಾರ್ಮಿಕನಿಗೆ.  ಆದರೆ ಜೀವನನಿರ್ವಾಹ ವೆಚ್ಚದ ಆಧಾರದ ಮೇಲೆ ಅವನ ಕೂಲಿಯ ನಿರ್ಧಾರವಾಗುತ್ತದೆ. ಉದ್ಯಮಿಯ ಲಾಭವೆಂಬುದು ವಾಸ್ತವವಾಗಿ ಕಾರ್ಮಿಕನಿಗೆ ಸಲ್ಲಿಸಬೇಕಾಗಿದ್ದೂ ಅವನಿಗೆ ಕೊಡದೆ ಉಳಿಸಿಕೊಂಡ ಭಾಗ ಎಂಬುದಾಗಿ ಆತ ವಾದಿಸಿದ. 

ಕೂಲಿ ನಿಧಿ ಸಿದ್ಧಾಂತ

ಜೀವನನಿರ್ವಾಹ ಕೂಲಿ ಸಿದ್ಧಾಂತದಿಂದ ವಿಕಾಸಗೊಂಡ ಸಿದ್ಧಾಂತವಿದು. ಜೆ.ಎಸ್.ಮಿಲ್(1806-1873) ಇದರ ಪ್ರತಿಪಾದಕನೆಂದು ಪರಿಗಣಿತನಾಗಿದ್ದಾನೆ.  ಕಾರ್ಮಿಕರಿಗಾಗಿ ಬೇಡಿಕೆ, ಕಾರ್ಮಿಕರ ಸರಬರಾಯಿ- ಇವನ್ನೇ ಕೂಲಿ ಅವಲಂಬಿಸಿದೆ ಎಂದು ಆತ ಬರೆದ.  ಜನಸಂಖ್ಯೆಯೂ ಬಂಡವಾಳವೂ ಕೂಲಿಯನ್ನು ನಿರ್ಧರಿಸುವ ಅಂಶಗಳು. ಇಲ್ಲಿ ಜನಸಂಖ್ಯೆಯೆಂದರೆ ಕಾರ್ಮಿಕ ಜನಸಂಖ್ಯೆ; ಬಂಡವಾಳವೆಂದರೆ ಆದರ್ಶ ಬಂಡವಾಳ; ಶ್ರಮವನ್ನುಕೊಳ್ಳಲು ಮಾಡಿದ ವೆಚ್ಚದ ಭಾಗ.  ಇದನ್ನು ಕೂಲಿ ನಿಧಿಯೆಂದು ಕರೆಯಲಾಗಿದೆ. ಒಂದು ದೇಶದಲ್ಲಿ ಲಭ್ಯವಿರುವ ಕೂಲಿ ನಿಧಿ. ಕೆಲಸ ಬಯಸುವ ಕಾರ್ಮಿಕರ ಸಂಖ್ಯೆ -ಇವಕ್ಕನುಗುಣವಾಗಿ ಕೂಲಿಯ ನಿರ್ಧಾರವಾಗುತ್ತದೆ. ಕೂಲಿ ಹೆಚ್ಚಬೇಕಾದರೆ ಬಂಡವಾಳನಿಧಿಯ ಮೊತ್ತ ಅಧಿಕವಾಗಬೇಕು.  ಇಲ್ಲವೇ ಕೆಲಸಗಾರರ ಸಂಖ್ಯೆ ಕಡಿಮೆಯಾಗಬೇಕು.  ಇವೆರಡರಲ್ಲಿ ಯಾವುದೂ ಸಂಭವಿಸದಿದ್ದಾಗ ಅಧಿಕ ಕೂಲಿ ಬೇಕೆಂದು ಕೇಳುವುದು ವ್ಯರ್ಥವಾಗುತ್ತದೆ - ಎಂದು ಮಿಲ್ ವಾದಿಸಿದ. ಈ ಸಿದ್ಧಾಂತ ಮಿಲ್ಲನ ಜೀವಿತ ಕಾಲದಲ್ಲೇ ಬಹುವಾದ ಟೀಕೆಗೆ ಒಳಗಾಯಿತು. ಮಿಲ್ಲನೇ ಅನಂತರ ಇದನ್ನು ತ್ಯಜಿಸಿದ. ಕೂಲಿಗೆ ಮೂಲವಾದ್ದು ಬಂಡವಾಳವೆ? ಅಥವಾ ಪ್ರಚಲಿತ ಉತ್ಪಾದನೆಯೆ? - ಎಂಬ ಬಗ್ಗೆ ವಿಪುಲವಾದ ವಾದ ನಡೆದಿದೆ.  ಬಂಡವಾಳದ ಒಂದು ಭಾಗವನ್ನು ಕೂಲಿಗಾಗಿ ತೆಗೆದಿಡಲಾಗುತ್ತದೆಯೆಂಬ ವಾದ ಸರಿಯಿಲ್ಲ. ಈ ದೃಷ್ಟಿಯಲ್ಲಿ ಸ್ಥಿರವಾದ ಕೂಲಿ ನಿಧಿ ಯಾವುದೂ ಇರುವುದಿಲ್ಲ. ಒಂದು ವೇಳೆ ಇರುವುದೆಂದು ಭಾವಿಸಿದರೂ ಅದು ಸ್ಥಿರನಿಧಿಯಂತೂ ಅಲ್ಲವೇ ಅಲ್ಲ. ಕೂಲಿ ನಿಧಿ ಸ್ಥಿರವಾಗಿರುವುದರಿಂದ, ಒಂದು ಕೈಗಾರಿಕೆಯಲ್ಲಿ ಕೂಲಿ ಹೆಚ್ಚಿಸಿದರೆ ಇನ್ನೊಂದು ಕೈಗಾರಿಕೆಯಲ್ಲಿ ಅದು ಇಳಿಯಬೇಕಾದ್ದು ಅನಿವಾರ್ಯ; ಇಲ್ಲದಿದ್ದರೆ ಕೆಲವರು ನಿರುದ್ಯೋಗಿಗಳಾಗಬೇಕಾಗುತ್ತದೆ - ಎಂದು ಕೂಲಿ ನಿಧಿ ಸಿದ್ಧಾಂತ ವಾದಿಸುತ್ತದೆ. ಇದು ಒಂದು ಸಂಕುಚಿತ ತಳಹದಿಯ ಮೇಲೆ ರಚಿತವಾದ ಸಿದ್ಧಾಂತವಾಗಿ, ಆಧುನಿಕ ಕೈಗಾರಿಕಾ ಸಮಾಜದಲ್ಲಿ ಕಂಡುಬರುವ, ಕೂಲಿಗೆ ಸಂಬಂಧಿಸಿದ, ಅನೇಕ ವಿಷಯಗಳ ಬಗ್ಗೆ ಏನನ್ನೂ ವಿವರಿಸಲು ಶಕ್ತವಾಗಿಲ್ಲ.  ಉದಾಹರಣೆಗೆ, ಆಧುನಿಕ ಕೈಗಾರಿಕಾ ಸಮಾಜದಲ್ಲಿ ಕಂಡುಬರುವ ಕೂಲಿ ಭಿನ್ನಕಗಳ(ವೇಜ್ ಡಿಫರೆನ್ಷಿಯಲ್ಸ್) ಬಗ್ಗೆ, ಕಾರ್ಮಿಕ ಸಂಘಗಳು ಕೂಲಿ ನಿರ್ಣಯದ ಮೇಲೆ ಬೀರುವ ಪ್ರಭಾವದ ಬಗ್ಗೆ ಏನೂ ಹೇಳುವುದಿಲ್ಲ. ಆರ್ಥಿಕತೆ ಬೆಳೆದಂತೆಲ್ಲ ಶ್ರಮದ ಬೇಡಿಕೆಯೂ ಹೆಚ್ಚಲೇಬೇಕು. ಈ ಬಗ್ಗೆ ಕೂಲಿ ನಿಧಿ ಸಿದ್ಧಾಂತ ಏನೂ ಹೇಳುವುದಿಲ್ಲ.  ಇದು ಒಂದು ಜಡ ಸಿದ್ಧಾಂತ.

ಅವಶಿಷ್ಟ ದಾವೀ ಸಿದ್ಧಾಂತ

ಅಮೆರಿಕನ್ ಅರ್ಥಶಾಸ್ತ್ರಜ್ಞ ಫ್ರಾನ್ಸಿಸ್ ಎ.ವಾಕರ್(1840-97) ಮಂಡಿಸಿದ ಸಿದ್ಧಾಂತವಿದು (ರೆಸಿಡ್ಯೂಯಲ್ ಕ್ಲೇಮೆಂಟ್ ತಿಯೊರಿ).  ಉತ್ಪಾದನೆಯಲ್ಲಿ ಇತರ ಉತ್ಪಾದನಾಂಗಗಳಿಗೆ ಕೊಡಬೇಕಾದ್ದನ್ನು ಕೊಟ್ಟ ಮೇಲೆ ಉಳಿಯುವುದು ಕೂಲಿ ಎಂದು ಅವನು ವಾದಿಸಿದ. ಗೇಣಿ, ಲಾಭ, ಬಡ್ಡಿ ಇವಕ್ಕೆಲ್ಲ ನಿರ್ಧಾರಕವಾದ ಖಚಿತ ನಿಯಮಗಳುಂಟೆಂಬುದು ಅವನ ಅಭಿಪ್ರಾಯವಾಗಿತ್ತು.  ಆದರೆ ಕೂಲಿಗೆ ಇಂಥ ಯಾವ ನಿಯಮಗಳೂ ಇಲ್ಲ.  ಒಟ್ಟು ಉತ್ಪಾದನೆಯಲ್ಲಿ ಆ ಮೂರೂ ಪಾವತಿಗಳನ್ನು ಮಾಡಿದ ಮೇಲೆ ಉಳಿದದ್ದು (ಅವಶಿಷ್ಟ) ಕಾರ್ಮಿಕರಿಗೆ ಕೂಲಿಯ ರೂಪದಲ್ಲಿ ಸಲ್ಲುತ್ತದೆ. ಕಾರ್ಮಿಕರು ಹೆಚ್ಚು ದಕ್ಷವಾಗಿ ಕೆಲಸ ಮಾಡಿದರೆ ಉತ್ಪಾದನೆ ಹೆಚ್ಚುತ್ತದೆ.  ಕಾರ್ಮಿಕರಿಗೆ ಸಲ್ಲುವ ಅವಶಿಷ್ಟದ ಭಾಗವೂ ಅಧಿಕವಾಗುತ್ತದೆ.  ಜೀವನನಿರ್ವಾಹ ಸಿದ್ಧಾಂತ ಅಥವಾ ಕೂಲಿ ನಿಧಿ ಸಿದ್ಧಾಂತದಂತೆ ನಿರಾಶಾವಾದಿಯಾಗಿಲ್ಲದ್ದು ಈ ಸಿದ್ಧಾಂತದ ಹೆಚ್ಚುಗಾರಿಕೆ.  ಆದರೆ ಈ ಸಿದ್ಧಾಂತವನ್ನು ಅನೇಕ ಅರ್ಥಶಾಸ್ತ್ರಜ್ಞರು ತಳ್ಳಿಹಾಕಿದರು.   ಕಾರ್ಮಿಕ ಸಂಘಗಳು ಕೂಲಿ ಏರಿಸಲು ಪ್ರಯತ್ನಿಸುವುದೇಕೆಂಬುದನ್ನು ಇದು ವಿವರಿಸುವುದಿಲ್ಲ.  ಶ್ರಮದ ಸರಬರಾಯಿಯಿಂದ ಬೇಡಿಕೆಯ ಮೇಲಾಗುವ ಪರಿಣಾಮವನ್ನೂ ಇದು ಪರಿಗಣಿಸುವುದಿಲ್ಲ.  ಬೇಡಿಕೆ - ಸರಬರಾಯಿಗಳ ಆಧಾರದ ಮೇಲೆ ನಿಂತ ನಿಯಮಗಳೇ ಕೂಲಿಗೂ ಏಕೆ ಅನ್ವಯವಾಗಲಾರವೆಂಬುದನ್ನು ಇದು ತಿಳಿಸುವುದಿಲ್ಲ.  ಇತರ ಎಲ್ಲ ಉತ್ಪಾದನಾಂಗಗಳಿಗೂ ಕೊಡಬೇಕಾದ್ದನ್ನು ಕೊಟ್ಟಮೇಲೆ ಉಳಿಯುವುದು ಕಾರ್ಮಿಕರ ಪಾಲು - ಎಂಬ ವಾದ ಸತ್ಯವೆಂದು ಎಲ್ಲರಿಗೂ ಒಪ್ಪಿಗೆಯಾಗಿಲ್ಲ.  ವಾಸ್ತವವಾಗಿ ಈ ಅವಶಿಷ್ಟದ ಅನುಭವದಾರನಾಗಿರುವವನು ಕಾರ್ಮಿಕನಲ್ಲ, ಉದ್ಯಮಿ.

ಸೀಮಾಂತ ಉತ್ಪಾದಕತೆ ಸಿದ್ಧಾಂತ

ಜೀವನನಿರ್ವಾಹ ಸಿದ್ಧಾಂತ ಮತ್ತು ಕೂಲಿ ನಿಧಿ ಸಿದ್ಧಾಂತಗಳಿಗೆ ಪ್ರತಿಕ್ರಿಯೆಯಾಗಿ ಬಂದ ಸಿದ್ಧಾಂತವಿದು (ಮಾರ್ಜಿನಲ್ ಪ್ರೊಡಕ್ಟಿವಿಟಿ ತಿಯೊರಿ).  ಪರಿಪೂರ್ಣ ಸ್ಪರ್ಧೆಯ ಪರಿಸ್ಥಿತಿಯಲ್ಲಿ, ಸಮಾನ ಕೌಶಲಸಾಮಥ್ರ್ಯಗಳಿರುವ ಪ್ರತಿಯೊಬ್ಬ ಕಾರ್ಮಿಕನಿಗೂ ಅವನ ಶ್ರಮದಿಂದ ಲಭ್ಯವಾಗುವ ಸೀಮಾಂತ ಉತ್ಪನ್ನದ ಮೌಲ್ಯಕ್ಕೆ ಸಮನಾಗಿ ಕೂಲಿ ನೆಲೆಗೊಳ್ಳುವುದೆಂಬುದು ಈ ಸಿದ್ಧಾಂತದ ಸಾರ.  ಕೈಗಾರಿಕೋತ್ಪಾದನೆಯಲ್ಲಿ ನಿಯೋಜಿಸಲಾದ ಇತರ ಉತ್ಪಾದನಾಂಗಗಳಲ್ಲಿ ಯಾವ ವ್ಯತ್ಯಾಸವೂ ಇಲ್ಲದಿದ್ದು, ಕಾರ್ಮಿಕರ ಸಂಖ್ಯೆಯನ್ನು ಇನ್ನೊಬ್ಬನಿಂದ ಅಧಿಕಗೊಳಿಸಿದ್ದೇ ಆದರೆ ಒಟ್ಟು ಉತ್ಪತ್ತಿಯಲ್ಲಾಗುವ ಆಧಿಕ್ಯವೇ ಶ್ರಮದ ಸೀಮಾಂತ ಉತ್ಪನ್ನವೆನಿಸುತ್ತದೆ.  ಸೀಮಾಂತ ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಯಾವ ಬೆಲೆಯಲ್ಲಿ ವಿಕ್ರಯಿಸಬಹುದೋ ಅದೇ ಶ್ರಮದ ಸೀಮಾಂತಮೌಲ್ಯ. ಕೊಟ್ಟಕೊನೆಯ ಕಾರ್ಮಿಕನನ್ನು ನೇಮಕ ಮಾಡಿಕೊಳ್ಳುವುದರಿಂದ ಲಭ್ಯವಾಗುವ ಉತ್ಪನ್ನಕ್ಕಿಂತ ಅವನಿಗೆ ಕೊಡುವ ಕೂಲಿಯ ವೆಚ್ಚ ಅಧಿಕವಾಗಿಲ್ಲದಿರುವವರೆಗೂ (ಪರಿಪೂರ್ಣ ಸ್ಪರ್ಧೆಯ ಪರಿಸ್ಥಿತಿಯಲ್ಲಿ) ಕಾರ್ಮಿಕರನ್ನು ಉದ್ಯಮಿ ನೇಮಿಸಿಕೊಳ್ಳುತ್ತಲೇ ಇರುತ್ತಾನೆ. ಪ್ರತಿಯೊಂದು ಕೈಗಾರಿಕೆಯೂ ಒಂದಿಲ್ಲೊಂದು ಘಟ್ಟದಲ್ಲಿ ಇಳಿಮುಖ ಪ್ರತಿಫಲ ಸೂತ್ರಕ್ಕೆ ಒಳಗಾಗುವುದಾದ್ದರಿಂದ,  ಶ್ರಮದ ಸೀಮಾಂತ ಉತ್ಪನ್ನವೂ ಇಳಿಮುಖವಾಗುವ ಘಟ್ಟ ಬಂದೇ ಬರುತ್ತದೆ. ಆ ಘಟ್ಟ ಬಂದ ಮೇಲೆ ಹೆಚ್ಚಿನ ಕಾರ್ಮಿಕರನ್ನು ನೇಮಿಸಿಕೊಳ್ಳುವುದನ್ನು ಉದ್ಯಮಿ ನಿಲ್ಲಿಸುತ್ತಾನೆ.  ಆ ಘಟ್ಟದಲ್ಲಿ ಕಾರ್ಮಿಕನ ಉತ್ಪನ್ನದ ಮೌಲ್ಯವೂ ಅವನಿಗೆ ಕೊಡಲಾಗುವ ಕೂಲಿಯ ದರವೂ ಸಮನಾಗಿರುತ್ತವೆ.

ಒಂದು ಕೈಗಾರಿಕೆಯಲ್ಲಿ ಹೆಚ್ಚುಹೆಚ್ಚು ಕಾರ್ಮಿಕರನ್ನು ನೇಮಿಸಿಕೊಂಡಂತೆಲ್ಲ ಶ್ರಮದ ವೆಚ್ಚದ ಜೊತೆಗೆ ಇತರ ವೆಚ್ಚಗಳೂ ಅಧಿಕವಾಗಬಹುದೆಂಬುದನ್ನು ಗಮನಿಸಬೇಕು.  ಆದ್ದರಿಂದ ಕಾರ್ಮಿಕನಿಗೆ ಕೊಡಬೇಕಾದ ಕೂಲಿ ದರದ ನಿಷ್ಕರ್ಷೆಯಾಗುವಾಗ ಇತರ ವೆಚ್ಚಗಳನ್ನೂ ಪರಿಗಣಿಸಬೇಕು.  ಶ್ರಮದ ಒಂದೊಂದು ಘಟಕವನ್ನೂ ಅಧಿಕಾಧಿಕವಾಗಿ ನೇಮಿಸಿಕೊಂಡಾಗ ಲಭ್ಯವಾಗುವ ಉತ್ಪತ್ತಿಯ ಮೌಲ್ಯದಿಂದ ಅದರ ಉತ್ಪಾದನೆಗೆ ಮಾಡಲಾದ ಇತರ ವೆಚ್ಚಗಳನ್ನು ಕಳೆದರೆ ಉಳಿಯುವುದು ಶ್ರಮದ ಸೀಮಾಂತ ನಿವ್ವಳ ಉತ್ಪನ್ನ(ಮಾರ್ಜಿನಲ್ ನೆಟ್ ಪ್ರಾಡಕ್ಟ್).  ಕಾರ್ಮಿಕರಿಗೆ ಕೊಡುವ ಕೂಲಿ ಇದಕ್ಕೆ ಸಮನಾಗಿರುತ್ತದೆ. 
ಸೀಮಾಂತ ಉತ್ಪಾದಕತೆ ಸಿದ್ಧಾಂತ ತರ್ಕಬದ್ಧವಾಗಿದೆಯಾದರೂ ವಾಸ್ತವವಾಗಿ ಅನ್ವಯಿಸುವಾಗ ಇದರಲ್ಲಿ ಅನೇಕ ದೋಷಗಳು ಕಂಡುಬರುತ್ತವೆ. ಈ ಸಿದ್ಧಾಂತ ಅನ್ವಯವಾಗತಕ್ಕದ್ದು ಪರಿಪೂರ್ಣ ಸ್ಪರ್ಧೆಯ ಪರಿಸ್ಥಿತಿಯಲ್ಲಿ. ಕಾರ್ಮಿಕರ ಪರಿಪೂರ್ಣ ಗತಿಶೀಲತೆ, ಎಲ್ಲ ದುಡಿಮೆಗಳ ಸಮಾನ ಗುಣಲಕ್ಷಣ, ಬಡ್ಡಿ ಬಾಡಿಗೆ ಬೆಲೆಗಳ ಸ್ಥಿರತೆ - ಇವೆಲ್ಲವೂ ಈ ಸಿದ್ಧಾಂತದ ಅನ್ವಯ ಸಾಧ್ಯವಾಗುತ್ತದೆ.  ಆದರೆ ಚಲನಾತ್ಮಕ ವ್ಯವಸ್ಥೆಯಲ್ಲಿ ಇಷ್ಟೆಲ್ಲ ಷರತ್ತುಗಳೂ ಪಾಲಿತವಾಗುವುವೆಂದು ನಿರೀಕ್ಷಿಸಲಾಗುವುದಿಲ್ಲ.  ಇವೆಲ್ಲವೂ ಬದಲಾಗುತ್ತಿರುತ್ತವೆ. ಇವು ಎಷ್ಟರಮಟ್ಟಿಗೆ ಬದಲಾಗುವುವೋ ಅಷ್ಟರಮಟ್ಟಿಗೆ ಈ ಸಿದ್ಧಾಂತದ ಅನ್ವಯದಲ್ಲೂ ಓರೆಕೋರೆ ಅನಿವಾರ್ಯ. ಉದ್ಯಮಿಗಳೂ ಕಾರ್ಮಿಕರೂ ಸಂಘಟಿತರಾಗಿ, ಪರಿಪೂರ್ಣ ಸ್ಪರ್ಧೆಯ ಪರಿಸ್ಥಿತಿಗೆ ಪ್ರತಿಬಂಧಕವೊಡ್ಡುತ್ತಿರುತ್ತಾರೆ. ಕಾರ್ಮಿಕನ ಉತ್ಪಾದಕತೆಯ ಮೇಲೆ ಪ್ರಭಾವ ಬೀರುವ ಅಂಶಗಳು ಅನೇಕ ಉಂಟು. ಕೂಲಿಯ ವ್ಯತ್ಯಾಸದಿಂದ ಕಾರ್ಮಿಕರ ಸರಬರಾಯಿಯಲ್ಲಾಗುವ ವ್ಯತ್ಯಾಸಗಳನ್ನೂ ಈ ಸಿದ್ಧಾಂತ ಪರಿಗಣಿಸುವುದಿಲ್ಲ. ತತ್ಕಾಲದಲ್ಲಿ ಶ್ರಮದ ಸೀಮಾಂತ ಉತ್ಪಾದಕತೆಯೇ ಕೂಲಿಯನ್ನು ನಿರ್ಧರಿಸುವುದಾದರೂ ಉದ್ಯಮಿ ನೀಡುವ ಕೂಲಿಯ ಮಟ್ಟ ಕಾರ್ಮಿಕರ ಜೀವನಮಟ್ಟಕ್ಕಿಂತ ಕಡಿಮೆಯಿರಕೂಡದು. ಕಾರ್ಮಿಕ ಜೀವನಮಟ್ಟದ ದೃಷ್ಟಿಯಲ್ಲಿ, ದುಡಿಮೆಯ ಸರಬರಾಯಿಗೆ ಅನುಗುಣವಾಗಿ ನಿಶ್ಚಿತವಾಗುವ ಬೆಲೆಯೂ ಕಾರ್ಮಿಕನ ಸೀಮಾಂತ ಉತ್ಪಾದಕತೆಯೂ ಸಮನಾಗಿರುವ ಬಿಂದುವಿನಲ್ಲಿ ಕಾರ್ಮಿಕರ ಕೂಲಿಯ ಮಟ್ಟ ದೀರ್ಘಕಾಲದಲ್ಲಿ ನೆಲೆಗೊಳ್ಳುವ ಪ್ರವೃತ್ತಿ ಹೊಂದಿರುತ್ತದೆ.

ಸೀಮಾಂತ ವಟಾಯಿತ ಉತ್ಪನ್ನ ಸಿದ್ಧಾಂತ

ಸೀಮಾಂತ ಉತ್ಪಾದಕತೆ ಸಿದ್ಧಾಂತವನ್ನು ಅಮೆರಿಕನ್ ಅರ್ಥಶಾಸ್ತ್ರಜ್ಞ ಟೌಸಿಗ್(1859-1940) ಸ್ವಲ್ಪ ಬದಲಾವಣೆ ಮಾಡಿ ಹೊಸದೊಂದು ಸಿದ್ಧಾಂತವನ್ನು ರೂಪಿಸಿದ. ಇದು ಸೀಮಾಂತ ವಟಾಯಿತ ಉತ್ಪನ್ನ ಸಿದ್ಧಾಂತ (ಮಾರ್ಜಿನಲ್ ಡಿಸ್ಕೌಂಟೆಡ್ ಪ್ರಾಡಕ್ಟ್ ತಿಯೊರಿ).  ಸೀಮಾಂತ ಉತ್ಪನ್ನದ ಮೌಲ್ಯಕ್ಕೆ ಸಮನಾಗಿ ಕಾರ್ಮಿಕನಿಗೆ ಕೂಲಿ ಲಭ್ಯವಾಗುವುದು ಸಾಧ್ಯವಿಲ್ಲವೆಂಬುದು ಅವನ ವಾದ.  ಏಕೆಂದರೆ ಕೂಲಿ ಕೊಡುವುದು ಇಂದಾದರೆ ಉತ್ಪಾದನೆ ಕೊನೆಗೊಳ್ಳುವುದು ಭವಿಷ್ಯದಲ್ಲಿ. ಇಂದು ಕಾರ್ಮಿಕನಿಗೆ ಕೂಲಿ ಕೊಡಲು ಸಾಧ್ಯವಾಗಿರುವುದು ಬಂಡವಾಳಿಗ-ಉದ್ಯಮಿಯಿಂದಾಗಿ.  ಅವನು ಕಾರ್ಮಿಕನಿಗೆ ದುಡಿಮೆಯಿಂದ ನಿರೀಕ್ಷಿಸಲಾದ ಸೀಮಾಂತ ಉತ್ಪನ್ನದ ಮೌಲ್ಯಕ್ಕೆ ಸಮನಾಗಿ ಕೂಲಿ ಕೊಡುವುದಿಲ್ಲ. ಭವಿಷ್ಯದಲ್ಲಿ ಲಭ್ಯವಾಗುವ ಉತ್ಪನ್ನಕ್ಕೆ ಮುಂಗಡವಾಗಿಯೇ ಅವನು ಕೂಲಿ ಕೊಡುವುದರಿಂದ ಆತ ನಷ್ಟಸಂಭವವನ್ನೆದುರಿಸಬೇಕಾಗುತ್ತದೆ. ಇದಕ್ಕಾಗಿ ಆತನಿಗೆ ಪರಿಹಾರ ಸಲ್ಲಬೇಕು. ಪ್ರಚಲಿತ ಬಡ್ಡಿಯ ದರದಲ್ಲಿ ತನಗೆ ಸಲ್ಲಬೇಕಾದ ಪರಿಹಾರವನ್ನು ಕಳೆದುಕೊಂಡು (ವಟಾಯಿಸಿಕೊಂಡು) ಉಳಿದದ್ದನ್ನು ಆತ ಕಾರ್ಮಿಕನಿಗೆ ಪಾವತಿ ಮಾಡುತ್ತಾನೆ. ಸೀಮಾಂತ ಭೂಮಿ ಅಥವಾ ಸೀಮಾಂತ ಉದ್ಯಮದ ಒಟ್ಟು ಉತ್ಪನ್ನಮೌಲ್ಯದಿಂದ ಮೇಲೆ ಸೂಚಿಸಿದಂತೆ ವಟ್ಟದ ಹಣವನ್ನು ಕಳೆದರೆ ಉಳಿಯುವುದೇ ಕಾರ್ಮಿಕರಿಗೆ ಲಭ್ಯವಾಗುವ ಕೂಲಿ. 
ಈ ಸಿದ್ಧಾಂತದ ದೌರ್ಬಲ್ಯವನ್ನು ಇತರರಿಗಿಂತ ಮುಂದಾಗಿ ಟೌಸಿಗನೇ ಕಂಡುಕೊಂಡು ಇದರ ಬಗ್ಗೆ ಬರಬಹುದಾದ ಟೀಕೆಗಳಿಗೆ ತಾನೇ ಉತ್ತರ ನೀಡಿದ್ದಾನೆ.  ಈ ಸಿದ್ಧಾಂತ ಬಲು ಅಸ್ಫುಟ. ಅಮೂರ್ತ; ವಾಸ್ತವ ಜೀವನದಿಂದ ಬಲು ದೂರ- ಎನ್ನಬಹುದು. ಆದರೆ ಈ ಮಾತು ಈ ಸಿದ್ಧಾಂತಕ್ಕೆ ಮಾತ್ರ ಅನ್ವಯಿಸುವಂಥದಲ್ಲ. ಎಲ್ಲ ಸಿದ್ಧಾಂತಗಳನ್ನೂ ಹೀಗೆಂದು ಟೀಕಿಸಬಹುದು-ಎನ್ನುತ್ತಾನೆ, ಟೌಸಿಗ್. ಉತ್ಪನ್ನದ ಮೌಲ್ಯದಿಂದ ಪ್ರಚಲಿತ ಬಡ್ಡಿದರದಲ್ಲಿ ವಟ್ಟವನ್ನು ಕಳೆಯಬೇಕೆಂದು ಈ ಸಿದ್ಧಾಂತದಲ್ಲಿ ಹೇಳಲಾಗಿದೆ. ಆದರೆ ಇಂದು ಕಾರ್ಮಿಕರಿಗೆ ಕೂಲಿಯ ರೂಪದಲ್ಲಿ ಪಾವತಿಯಾಗುವುದಕ್ಕಿಂತ ಅಧಿಕವಾಗಿ ಕಾರ್ಮಿಕರಿಂದ ಭವಿಷ್ಯದಲ್ಲಿ ಲಭ್ಯವಾಗುವ ಉತ್ಪಾದನೆಯನ್ನೇ ಇದು ಅವಲಂಬಿಸಿದೆಯೆಂದೂ ಹೇಳಲಾಗಿದೆ. ಇವೆರಡೂ ವಾಸ್ತವವಾಗಿ ಒಂದೇ.  ಟೌಸಿಗನ ಸಿದ್ಧಾಂತ ಹೊಸದೇನೂ ಅಲ್ಲ. ಅದು ವಾಸ್ತವವಾಗಿ ಅವಶಿಷ್ಟ ದಾವೀಸಿದ್ಧಾಂತದ ಇನ್ನೊಂದು ರೂಪ.  ಗೇಣಿ, ಬಡ್ಡಿ, ಲಾಭ ಇವನ್ನು ಕಳೆದಮೇಲೆ ಉಳಿಯುವುದೇ ಕೂಲಿ - ಎಂದೇ ಈ ಸಿದ್ಧಾಂತವೂ ಹೇಳುತ್ತದೆ.
ಸಾಮೂಹಿಕ ಚೌಕಾಸಿ ಸಿದ್ಧಾಂತಗಳು

ಇತ್ತೀಚೆಗೆ ಕೂಲಿ ನಿರ್ಣಯ ಪ್ರಬಲ ಕಾರ್ಮಿಕ ಸಂಘಗಳ ಹಾಗೂ ಉದ್ಯಮಿಗಳ ಸಂಘಗಳ ಮಧ್ಯೆ ನಡೆಯುವ ಚರ್ಚೆಯ ಮೂಲಕ ನಿರ್ಣಯವಾಗುತ್ತಿದೆ.  ಈ ವಿಧಾನಕ್ಕೆ ಸಾಮೂಹಿಕ ಚೌಕಾಸಿ ಪ್ರಕ್ರಿಯೆ ಎಂದು ಕರೆಯುತ್ತಾರೆ. ಈ ನಿಟ್ಟಿನಲ್ಲಿ ರಚಿಸಲಾದ ಕೂಲಿ ಸಿದ್ಧಾಂತಗಳು ಸಾಮೂಹಿಕ ಚೌಕಾಸಿ ಸಿದ್ಧಾಂತಗಳು.  ಇವುಗಳ ರಚನೆಯಲ್ಲಿ ವೆಬ್, ಕ್ಲಾರ್ಕ್, ಪಿಗು, ಮಾರಿಸ್ ದಾಬ್ ಮುಂತಾದ ಅರ್ಥಶಾಸ್ತ್ರಜ್ಞರು ಸಾಕಷ್ಟು ಶ್ರಮಿಸಿದ್ದಾರೆ.  ಇವರ ಪ್ರಕಾರ ಕಾರ್ಮಿಕರ ಕೂಲಿ ಎರಡು ಮಟ್ಟಗಳ - ಮೇಲಿನ ಮಟ್ಟ ಮತ್ತು ಕೆಳಗಿನ ಮಟ್ಟಗಳ - ಮಧ್ಯೆ, ಕಾರ್ಮಿಕ ಸಂಘಗಳ ಹಾಗೂ ಉದ್ಯಮಿಗಳ ಪರಸ್ಪರ ಬಲಗಳಿಗೆ ಅನುಸಾರವಾಗಿ ನಿರ್ಣಯವಾಗುತ್ತದೆ. ಮೇಲಿನದು ಸಾಮಾನ್ಯವಾಗಿ ಕಾರ್ಮಿಕರ ಗರಿಷ್ಠ ಉತ್ಪಾದನ ಮಟ್ಟವಾಗಿಯೂ ಕೆಳಗಿನದು ಕಾರ್ಮಿಕರ ಜೀವನ ನಿರ್ವಾಹ ಮಟ್ಟವಾಗಿಯೂ ಇರುತ್ತದೆ.  ಕಾರ್ಮಿಕರ ಕೂಲಿ ಅವರ ಉತ್ಪಾದನ ಮಟ್ಟವನ್ನು ಮೀರುವುದಿಲ್ಲ ಅಥವಾ ಜೀವನ ನಿರ್ವಾಹ ಮಟ್ಟಕ್ಕಿಂತ ಕೆಳಕ್ಕಿಳಿಯುವುದಿಲ್ಲ - ಎಂದು ಊಹಿಸಲಾಗಿದೆ.  ಈ ಎರಡು ಮಟ್ಟಗಳ ಮಧ್ಯೆ, ಕಾರ್ಮಿಕ ಸಂಘಗಳು ಹೆಚ್ಚು ಬಲಯುತವಾಗಿದ್ದರೆ ಮೇಲಿನ ಮಟ್ಟದ ಹತ್ತಿರವೂ ಉದ್ಯಮಿಗಳ ಬಲ ಹೆಚ್ಚಾಗಿದ್ದರೆ ಕೆಳಗಿನ ಮಟ್ಟದ ಹತ್ತಿರವೂ ಕೂಲಿ ನೆಲೆಗೊಳ್ಳುವ ಪ್ರವೃತ್ತಿ ತೋರುತ್ತದೆ.  ಸಾಮೂಹಿಕ ಚೌಕಾಸಿ ಸಿದ್ಧಾಂತಗಳು ಕೂಲಿಯ ನಿರ್ಣಯವನ್ನು ಸಂಪೂರ್ಣವಾಗಿ ವಿವರಿಸುವುದಿಲ್ಲ.  ಸಂಘಗಳ ಪರಸ್ಪರ ಶಕ್ತಿಯೇ ಮುಖ್ಯ ನಿರ್ಣಾಯಕ ವಿಷಯವಾಗಿದ್ದರೆ ಈಗಿರುವುದಕ್ಕಿಂತ ಬಲು ಹೆಚ್ಚು ಕೂಲಿ ವ್ಯತ್ಯಾಸಗಳು ಕಾಣಬರುತ್ತಿದ್ದುವು. ಆದರೂ ಅನೇಕ ಚೌಕಾಸಿ ಮಾದರಿಗಳು ಕೆಲವು ಅರ್ಥಶಾಸ್ತ್ರಜ್ಞರಿಂದ ನಿರ್ಮಾಣವಾಗಿ ಕೂಲಿ ನಿರ್ಣಯವನ್ನು ವಿವರಿಸುವುದಕ್ಕೆ ಪ್ರಯತ್ನಪಟ್ಟಿವೆ. ಈ ಮಾದರಿಗಳೆಲ್ಲವೂ ಮಾನಸಿಕ ಅಂಶಗಳಿಗೆ ಹೆಚ್ಚು ಗಮನ ಕೊಟ್ಟು, ಕಾರ್ಮಿಕ ಸಂಘಗಳು ಮತ್ತು ಉದ್ಯಮಿಗಳ ಸಂಘಗಳು ಸಾಮೂಹಿಕ ಚೌಕಾಸಿ ವಿಧಾನಗಳಲ್ಲಿ ಹೇಗೆ ನಡೆದುಕೊಳ್ಳುತ್ತವೆಯೆಂಬುದನ್ನು ತೋರಿಸುತ್ತವೆ.

ಇತ್ತೀಚಿನ ಬೆಳೆವಣಿಗೆಗಳು : ಸಾಮೂಹಿಕ ಚೌಕಾಸಿ ಸಿದ್ಧಾಂತವನ್ನು ರಚಿಸುವಾಗ ಕೆಲವು ಅರ್ಥಶಾಸ್ತ್ರಜ್ಞರು ಆರ್ಥಿಕ ಅಂಶಗಳಿಗೂ ಮತ್ತೆ ಕೆಲವರು ಮಾನಸಿಕ ಅಂಶಗಳಿಗೂ ಗಮನ ಕೊಟ್ಟಿದ್ದಾರೆ.  ಇತ್ತೀಚೆಗೆ ಸಾಂಸ್ಥಿಕ ಅಂಶಗಳಿಗೆ ಹೆಚ್ಚು ಪ್ರಾಧಾನ್ಯ ಸಂದಿದೆ. ಸಾಮೂಹಿಕ ಚೌಕಾಸಿ, ಪರಿನಿಯತ ನಿಬಂಧನೆ(ಸ್ಪಾಚ್ಯುಟರಿ ರೆಗ್ಯುಲೇಷನ್) ನ್ಯಾಯ ಮಂಡಲಿಗಳ(ಟ್ರಿಬ್ಯೂನ್ಸ್) ತೀರ್ಪು- ಈ ಮೂರು ವಿಧಾನಗಳಿಂದ ಕೂಲಿಯ ನಿರ್ಣಯವಾಗುತ್ತದೆಯೆಂದು ಪರಿಗಣಿಸಲಾಗಿದೆ. ಈ ಮೂರು ವಿಧಾನಗಳಲ್ಲೂ ಕಾರ್ಮಿಕರ ಕೂಲಿ ಸ್ವಾಭಾವಿಕ ಮಾರುಕಟ್ಟೆಯ ಒತ್ತಡಗಳಿಂದ ನಿರ್ಣಯವಾಗದೆ ಸಾಮಾಜಿಕ ಸಾಂಸ್ಥಿಕ ಒತ್ತಡಗಳಿಂದ ನಿರ್ಣಯವಾಗುತ್ತದೆ. ಆಧುನಿಕ ಕೂಲಿ ನಿರ್ಣಯದಲ್ಲಿ ಸಾಮಾಜಿಕ ನ್ಯಾಯ ಬಹು ಮುಖ್ಯ ಪಾತ್ರವಹಿಸುತ್ತದೆ. ಕಾರ್ಮಿಕರ ಜೀವನಮಟ್ಟ, ಅವರ ಉತ್ಪಾದಕತೆ ಮತ್ತು ಸಮಾನ ವೇತನ ಇವುಗಳ ಆಧಾರದ ಮೇಲೆ ಕೂಲಿ ನಿರ್ಣಯವಾಗಲು ಕಾರ್ಮಿಕ ಸಂಘಗಳು ಒತ್ತಾಯಪಡಿಸುವ ಹಾಗೆ ಸರ್ಕಾರವೂ ನ್ಯಾಯಮಂಡಲಿಗಳೂ ಸಾಮಾಜಿಕ ನ್ಯಾಯದ ಆಧಾರದ ಮೇಲೆ, ಹೆಚ್ಚು ಉತ್ಪಾದಕತೆಯ ಪ್ರಯೋಜನಗಳು ಪ್ರತಿಯೊಬ್ಬ ಪ್ರಜೆಗೂ ಸಲ್ಲಬೇಕೆಂಬ ಆಧಾರದ ಮೇಲೆ ಕೂಲಿ ನಿರ್ಣಯಿಸಲು ಒತ್ತಾಯ ಹೇರುತ್ತವೆ.    (ಎಸ್.ಎನ್.ಎ.)

ಬೇಡಿಕೆ ಮತ್ತು ಸರಬರಾಯಿ ಸಿದ್ಧಾಂತ

ಶ್ರಮ ಒಂದು ಪದಾರ್ಥವೆಂದು ಪರಿಗಣಿಸುವುದಕ್ಕಾಗುವುದಿಲ್ಲ. ಪದಾರ್ಥಕ್ಕಿಲ್ಲದ ಕೆಲವು ವೈಶಿಷ್ಟ್ಯಗಳು ಶ್ರಮಕ್ಕುಂಟು.  ಆದರೂ ಬೇಡಿಕೆ ಮತ್ತು ಸರಬರಾಯಿಗಳ ಬಲಗಳ ಪರಸ್ಪರ ಕ್ರಿಯೆಗಳ ಪರಿಣಾಮವಾಗಿ ಪದಾರ್ಥಗಳ ಬೆಲೆಯ ನಿಷ್ಕರ್ಷೆಯಾಗುವಂತೆ ಕೂಲಿಯ ನಿರ್ಣಯವೂ ಆಗುವುದೆಂದು ಪರಿಭಾವಿಸಿ, ಅವುಗಳನ್ನು ಆಧರಿಸಿದ ಕೂಲಿ ಸಿದ್ಧಾಂತವೂ ರಚಿತವಾಗಿದೆ.  ಒಂದು ಉದ್ಯಮದಿಂದ ಶ್ರಮಕ್ಕಾಗಿ ಬರುವ ಬೇಡಿಕೆ ಎರಡು ಅಂಶಗಳನ್ನವಲಂಬಿಸಿದೆ. ಶ್ರಮದ ಉತ್ಪಾದಕತೆ ಒಂದು ಅಂಶ, ಉದ್ಯಮದ ಉತ್ಪನ್ನಕ್ಕೆ ಹಣದ ರೂಪದಲ್ಲಿ ವ್ಯಕ್ತವಾಗುವ ಬೇಡಿಕೆ ಇನ್ನೊಂದು ಅಂಶ. ಉತ್ಪಾದಿತ ಪದಾರ್ಥಕ್ಕೆ ಅನುಭೋಗಿಗಳಿಂದ ಬರುವ ಬೇಡಿಕೆಗೆ ಅನುಗುಣವಾಗಿ ಉತ್ಪಾದಕರಿಂದ ಕಾರ್ಮಿಕರಿಗಾಗಿ ಬೇಡಿಕೆ ಇರುತ್ತದೆ. ಉದ್ಯಮದ ಉತ್ಪತ್ತಿಗೆ ಬೇಡಿಕೆಯಲ್ಲಿ ಪುಟಿತತೆಯಿದ್ದರೆ ಕಾರ್ಮಿಕನ ಬೇಡಿಕೆಯಲ್ಲೂ ಪುಟಿತತೆ ಇರುತ್ತದೆ.  ಉತ್ಪಾದಿತ ಸರಕಿನ ಮೌಲ್ಯದಲ್ಲಿ ಕೂಲಿಯ ಅಂಶ ಬಹು ಅಲ್ಪವಾಗಿದ್ದ ಪಕ್ಷದಲ್ಲಿ ಕೂಲಿ ಅಪುಟಿತವಾಗಿರುತ್ತದೆ. ಉತ್ಪಾದನೆಯಲ್ಲಿ ಸಹಕರಿಸುವ ಅಂಶಗಳನ್ನೂ ಶ್ರಮದ ಬೇಡಿಕೆ ಅವಲಂಬಿಸಿರುವುದುಂಟು.  ಸಹಕಾರಿ ಅಂಶಗಳ ಬೆಲೆ ಅಧಿಕವಾಗಿದ್ದಾಗ ಆ ಅಂಶಗಳ ಬದಲು ಕಾರ್ಮಿಕರನ್ನು ಹೆಚ್ಚಾಗಿ ನೇಮಿಸಿಕೊಳ್ಳುವ ಪ್ರವೃತ್ತಿ ಕಂಡುಬರುತ್ತದೆ. ಉದಾಹರಣೆಗೆ, ಯಂತ್ರದ ಬೆಲೆ ತುಟ್ಟಿಯಾಗಿದ್ದಾಗ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗುತ್ತದೆ. ತಾಂತ್ರಿಕ ಪರಿಸ್ಥಿತಿ, ಉತ್ಪಾದನೆಯ ಸಹಕಾರಿ ಅಂಶಗಳ ಬೆಲೆಗಳು, ಉತ್ಪನ್ನಕ್ಕೆ ಬೇಡಿಕೆ - ಇವೆಲ್ಲ ಕಾರ್ಮಿಕನ ಬೇಡಿಕೆಯನ್ನು ನಿರ್ಣಯಿಸುವ ಅಂಶಗಳು. ಇವುಗಳ ಜೊತೆಗೆ - ಇವುಗಳನ್ನೂ ಆಧರಿಸಿದ - ಶ್ರಮದ ಸೀಮಾಂತ ಉತ್ಪಾದಕತೆಯೂ ಪರಿಗಣಿಸಬೇಕಾದ ಒಂದು ಮುಖ್ಯ ಅಂಶ. ಇದಕ್ಕನುಗುಣವಾಗಿ ಉದ್ಯಮಿಯಿಂದ ಕಾರ್ಮಿಕನಿಗೆ ಬೇಡಿಕೆ ಬರುತ್ತದೆ. ಪರಿಪೂರ್ಣ ಸ್ಪರ್ಧೆಯ ಪರಿಸ್ಥಿತಿಯಲ್ಲಿ ಕೂಲಿಯ ನಿರ್ಧಾರವಾಗುವುದು ಮಾರುಕಟ್ಟೆಯ ಬಲಗಳಿಂದ. ಯಾವೊಬ್ಬ ಉದ್ಯಮಿಯ ತೀರ್ಮಾನಗಳಿಂದಲೇ ಆಗಲಿ ಕೂಲಿಯ ಮಟ್ಟ ಬದಲಾಗುವುದಿಲ್ಲ.
ಕೂಲಿನ ನಾನಾ ದರಗಳಲ್ಲಿ ಯಾವುದೇ ಪ್ರರೂಪದ ಶ್ರಮವನ್ನೊದಗಿಸಲು ಸಿದ್ಧವಾಗಿರುವ ಕಾರ್ಮಿಕರ ಒಟ್ಟು ಸಂಖ್ಯೆಯೇ ಶ್ರಮದ ಸರಬರಾಯಿ. ಇದನ್ನು ಮೂರು ದೃಷ್ಟಿಗಳಿಂದ ನೋಡಬಹುದು. ಒಂದು ಉದ್ಯಮಸಂಸ್ಥೆಯ ದೃಷ್ಟಿಯಲ್ಲಿ ಶ್ರಮದ ಸರಬರಾಯಿಗೆ ಪುಟಿತತೆ ಇರುತ್ತದೆ. ಅದು ಎಷ್ಟು ಕಾರ್ಮಿಕರನ್ನು ಬೇಕಾದರೂ ನೇಮಿಸಿಕೊಳ್ಳಬಹುದು. ಕಾರ್ಮಿಕರ ಒಟ್ಟು ಸರಬರಾಯಿಯಲ್ಲಿ ಕೇವಲ ಒಂದು ಸಂಸ್ಥೆಯ ಬೇಡಿಕೆ ಯಃಕಶ್ಚಿತ. ಒಂದು ಕೈಗಾರಿಕೆಯ ದೃಷ್ಟಿಯಲ್ಲಿ ಸರಬರಾಯಿಯ ಪುಟಿತತೆ ಅಮಿತವಲ್ಲ. ಆದ್ದರಿಂದ ಅದು ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಳ್ಳಬೇಕಾದರೆ ಹೆಚ್ಚು ಕೂಲಿ ನೀಡಿ ಇತರ ಕೈಗಾರಿಕೆಗಳಿಂದ ಅವರನ್ನು ಆಕರ್ಷಿಸಬೇಕು. ಹೆಚ್ಚು ಕೂಲಿಗೆ ಹೆಚ್ಚು ಸರಬರಾಯಿ; ಕಡಿಮೆ ಕೂಲಿಗೆ ಕಡಿಮೆ ಸರಬರಾಯಿ - ಎಂಬುದು ಅನ್ವಯವಾಗುವ ತತ್ವ. ಯಾವುದೇ ಉದ್ಯೋಗದಲ್ಲಿ ದೀರ್ಘಕಾಲದಲ್ಲಿ ಕಾರ್ಮಿಕರ ಸರಬರಾಯಿ ರೇಖೆ ಒಂದು ಸರಳರೇಖೆಯಾಗಿರುತ್ತದೆ. ಇಡೀ ಅರ್ಥವ್ಯವಸ್ಥೆಯ ದೃಷ್ಟಿಯಲ್ಲಿ ಕಾರ್ಮಿಕರ ಸರಬರಾಯಿಯನ್ನು ನಿರ್ಣಯಿಸುವ ಅಂಶಗಳು ಅನೇಕ. ಅವು ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಥಿಕ ಅಂಶಗಳು.

ಪರಿಪೂರ್ಣ ಸ್ಪರ್ಧೆಯ ಪರಿಸ್ಥಿತಿಯಲ್ಲಿ ಶ್ರಮದ ಸರಬರಾಯಿ ನಾನಾ ಉದ್ಯೋಗಗಳಲ್ಲಿ ಹಂಚಿಹೋಗಿರುತ್ತದೆ; ಎಲ್ಲ ಉದ್ಯೋಗಗಳಲ್ಲೂ ಶ್ರಮದ ಸೀಮಾಂತ ಉತ್ಪಾದಕತೆ ಒಂದೇ ಆಗಿರುತ್ತದೆ. ಆದರೆ ಕಾರ್ಮಿಕರು ಒಂದು ಉದ್ಯೋಗದಿಂದ ಇನ್ನೊಂದು ಉದ್ಯೋಗಕ್ಕೆ ಸುಲಭವಾಗಿ ಚಲಿಸದಿದ್ದರೆ ಆಗ ಬೇರೆಬೇರೆ ಉದ್ಯೋಗಗಳಲ್ಲಿ ಬೇರೆಬೇರೆ ಸೀಮಾಂತ ಉತ್ಪಾದಕತೆಗಳಿರುತ್ತವೆ.  ಕಾರ್ಮಿಕರು ಸಂಘಗಳನ್ನು ರಚಿಸಿಕೊಂಡು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಉದ್ದೇಶದಿಂದ ಮುಷ್ಕರ ಹೂಡಿದರೆ, ಕೆಲಸ ಮಾಡಲು ನಿರಾಕರಿಸಿದರೆ, ಆಗ ಕಾರ್ಮಿಕರ ಸರಬರಾಯಿ ಕಡಿಮೆಯಾಗಬಹುದು. ಕಾರ್ಮಿಕರು ತಮಗೆ ಒಗ್ಗಿರುವ ಜೀವನಮಟ್ಟಕ್ಕಿಂತ ಕಡಿಮೆಯ ಕೂಲಿಯನ್ನೊಪ್ಪಿಕೊಳ್ಳದಿರಬಹುದು.  ಆದರೆ ಸೀಮಾಂತ ಉತ್ಪಾದಕತೆಗಿಂತ ಹೆಚ್ಚು ಕೂಲಿ ಬೇಡುವುದೂ ಕಷ್ಟವಾಗಬಹುದು.  ಕಾರ್ಮಿಕರಿಗೆ ಹೆಚ್ಚಿನ ಧಾರಣ ಶಕ್ತಿ ಇಲ್ಲದಾಗ, ಕೆಲಸವಿಲ್ಲದಿದ್ದರೆ ಅವರು ಉಪವಾಸ ಮಾಡಬೇಕಾದ್ದು ಅನಿವಾರ್ಯವೆನಿಸಿದಾಗ, ಕಾರ್ಮಿಕರ ಸರಬರಾಯಿ ಅಪುಟಿತವಾಗಿರುತ್ತದೆ.  ಒಂದು ಕನಿಷ್ಠ ಮಟ್ಟಕ್ಕಿಂತ ಕೂಲಿ ಕಡಿಮೆಯಾದಾಗ ಕಾರ್ಮಿಕರು ಕೆಲಸ ಮಾಡಲು ನಿರಾಕರಿಸಬಹುದು. ಕನಿಷ್ಠ ಮಿತಿಗಿಂತ ಹೆಚ್ಚಿನ ಕೂಲಿ ನೀಡಿದಾಗ ಅವರ ಸರಬರಾಯಿ ಅಧಿಕವಾಗುತ್ತದೆ. ಆದರೆ ಇದು ಒಂದು ಘಟ್ಟದವರೆಗೆ ಮಾತ್ರ. ಜೀವನದ ಒಂದು ಮಟ್ಟದ ಕೂಲಿ ದೊರಕಿದ ಮೇಲೆ ಕಾರ್ಮಿಕರು ಹೆಚ್ಚು ದುಡಿಮೆಗಿಂತ ವಿರಾಮಕ್ಕೇ ಹೆಚ್ಚಿನ ಪ್ರಾಶಸ್ತ್ಯ ನೀಡಬಹುದು. ಹೀಗೆ ಹೆಚ್ಚು ಕೂಲಿಯಿಂದ ಶ್ರಮದ ಸರಬರಾಯಿ ಅಧಿಕವಾಗಬಹುದೆಂಬಂತೆಯೇ ಕೆಲವು ಸಂದರ್ಭಗಳಲ್ಲಿ ಕಡಿಮೆಯಾಗುವ ಸಂಭವವೂ ಉಂಟು.  ವಿವಿಧ ಕೂಲಿಗಳಲ್ಲಿ ಕೆಲಸ ಮಾಡಲು ಇಚ್ಛೆಯನ್ನೂ ಶಕ್ತಿಯನ್ನೂ ಹೊಂದಿರುವ ಕಾರ್ಮಿಕರ ಸಂಖ್ಯೆ, ಪ್ರತಿಯೊಬ್ಬ ಕಾರ್ಮಿಕನೂ ದುಡಿಯಬಯಸುವ ಮತ್ತು ದುಡಿಯಲು ಶಕ್ತನಾಗಿರುವ ಗಂಟೆಗಳ ಸಂಖ್ಯೆ - ಇವುಗಳ ಮೇಲಿಂದ ಶ್ರಮದ ಸರಬರಾಯಿಯನ್ನು ಅಳೆಯಬಹುದಾಗಿದೆ.  

ಶ್ರಮದ ಬೇಡಿಕೆ ಮತ್ತು ಸರಬರಾಯಿಗಳ ಪರಸ್ಪರ ಕ್ರಿಯೆಗಳಿಂದ ಕೂಲಿಯ ಮಟ್ಟ ಹೇಗೆ ನಿರ್ಧಾರವಾಗುವುದೆಂಬುದನ್ನು ಚಿತ್ರ 1 ಮತ್ತು 2 ರಲ್ಲಿ ತೋರಿಸಿದೆ: 1 ನೆಯ ಚಿತ್ರ ಒಂದು ಕೈಗಾರಿಕೆಗೂ 2ನೆಯದು ಒಂದು ಉದ್ಯಮಸಂಸ್ಥೆಗೂ ಸಂಬಂಧಿಸಿವೆ. ಚಿತ್ರ 1 ರಲ್ಲಿ SS ಎಂಬುದು ಕೈಗಾರಿಕೆಯಲ್ಲಿ ಶ್ರಮದ ಸರಬರಾಯಿ ರೇಖೆ. ಆಆ  ಎಂಬುದು ಬೇಡಿಕೆ ರೇಖೆ. SS ಮತ್ತು ಆಆ ಗಳು ಇಯಲ್ಲಿ ಛೇದಿಸುತ್ತವೆ. ಔW(ಓಇ) ಎಂಬುದು ಕೂಲಿಯ ಮಟ್ಟ. ಒಂದು ಉದ್ಯಮ ಸಂಸ್ಥೆಗೆ ಸಂಬಂಧಿಸಿದಂತೆ ಇದರ ಅನ್ವಯ ಹೇಗಾಗುವುದೆಂಬುದನ್ನು 2ನೆಯ ಚಿತ್ರದಲ್ಲಿ ತೋರಿಸಿದೆ. ಮಾರುಕಟ್ಟೆಯಲ್ಲಿ ನಿರ್ಧಾರವಾದ ಕೂಲಿಯ ಮಟ್ಟವಾದ ಔWನ್ನು ಉದ್ಯಮ ಸಂಸ್ಥೆ ಒಪ್ಪಿಕೊಳ್ಳಬೇಕಾಗುತ್ತದೆ. ಆದ್ದರಿಂದ 1ನೆಯ ಚಿತ್ರದ Wಇ ರೇಖೆಯನ್ನೇ 2ನೆಯ ಚಿತ್ರಕ್ಕೂ ವಿಸ್ತರಿಸಬೇಕು.

ಚಿತ್ರ-1-ಮತ್ತು-2

 ಸಂಸ್ಥೆಯ ಸೀಮಾಂತ ಹುಟ್ಟುವಳಿ ಉತ್ಪಾದಕತೆ ರೇಖೆಯನ್ನು  (ಒಖP) ಇ' ಯಲ್ಲಿ ರೇಖೆ WW ಛೇದಿಸುತ್ತದೆ. ಎಂದರೆ ಒಇ' (ಔW ; ಓಇ) ಎಂಬುದು ಉದ್ಯಮ ಸಂಸ್ಥೆ ಕೊಡಬೇಕಾದ ಕೂಲಿ.  ಇದು ಮಾರುಕಟ್ಟೆಯಿಂದ ನಿಶ್ಚಿತವಾದ ಕೂಲಿ.  ಈ ಉದ್ಯಮ ಸಂಸ್ಥೆಯೂ ಇದರಂತೆ ಈ ಕೈಗಾರಿಕೆಯ ಎಲ್ಲ  ಉದ್ಯಮ ಸಂಸ್ಥೆಗಳೂ ಈ ಕೂಲಿಯನ್ನು ಕೊಡಬೇಕು. ಈ ಘಟ್ಟದಲ್ಲಿ ಪ್ರತಿಯೊಂದು ಉದ್ಯಮ ಸಂಸ್ಥೆಯ ಸರಾಸರಿ ಹುಟ್ಟುವಳಿ ಉತ್ಪಾದಕತೆಯೂ ಒಖ ಆಗಿರುತ್ತದೆ. ಎಂದರೆ ಪ್ರತಿಯೊಂದು ಸಂಸ್ಥೆಯೂ ಅದುಕೊಡುವ  (ಒಇ') ಕೂಲಿಗಿಂತ ಇ'ಖ ನಷ್ಟು ಹೆಚ್ಚು ಲಾಭವನ್ನು- ಅತೀತ ಪ್ರಸಾಮಾನ್ಯ ಲಾಭವನ್ನು (ಸೂಪರ್ ನಾರ್ಮಲ್ ಪ್ರಾಫಿಟ್ಸ್) - ಸಂಪಾದಿಸುತ್ತದೆ. ಇದರಿಂದ ಆಕರ್ಷಿತವಾಗಿ ಹೊಸ ಸಂಸ್ಥೆಗಳು ಈ ಕೈಗಾರಿಕೆಯನ್ನು ಪ್ರವೇಶಿಸುತ್ತವೆ.  ಕಾರ್ಮಿಕರಿಗೆ ಬೇಡಿಕೆ ಹೆಚ್ಚುತ್ತದೆ. ಕೂಲಿಯ ಮಟ್ಟ ಏರುತ್ತದೆ. ಅತೀತ ಪ್ರಸಾಮಾನ್ಯ ಲಾಭ ದೀರ್ಘಕಾಲದಲ್ಲಿ ಅದೃಶ್ಯವಾಗುವುದು ಅನಿವಾರ್ಯ. ಕೈಗಾರಿಕೆಯಲ್ಲಿ ಶ್ರಮಕ್ಕಾಗಿ ಬೇಡಿಕೆ ಆ'ಆ' ಗೆ ಬದಲಾಗಿರುತ್ತದೆ. (ಚಿತ್ರ 1) ಇದರಿಂದಾಗಿ ಕೈಗಾರಿಕೆಯ ಸಮತೋಲ ಸ್ಥಾಪಿತವಾಗುವುದು ಈ ಈನಲ್ಲಿ. ಈ ಮಟ್ಟದಲ್ಲಿ ಸರಾಸರಿ ಉತ್ಪಾದಕತೆಯೂ (ಂಖP) ಸೀಮಾಂತ ಉತ್ಪಾದಕತೆಯೂ (ಒಖP) ಸಮವಾಗಿರುತ್ತವೆ. (ಚಿತ್ರ 2). ಕೂಲಿಯ ಮಟ್ಟ ಔW'. 
ಅತೀತ ಪ್ರಸಾಮಾನ್ಯ ಲಾಭದ ಪರಿಣಾಮವಾಗಿ ಹೊಸ ಸಂಸ್ಥೆಗಳು ಕೈಗಾರಿಕೆಯನ್ನು ಪ್ರವೇಶಿಸುವುದೆಂದು ಹೇಳಲಾಯಿತಷ್ಟೆ.  ಂಖP ಯೂ ಒಖP ಯೂ ಸಮವಾಗಿ ಪರಿಣಮಿಸುವ ಬಿಂದುವಿಗೆ ಸರಿಯಾಗಿ ಅವುಗಳ ಆಗಮನ ನಿಲ್ಲದಿರಬಹುದು. ಅಗತ್ಯಕ್ಕಿಂತ ಹೆಚ್ಚು ಸಂಸ್ಥೆಗಳು ಬರಬಹುದು. ಆಗ ಕಾರ್ಮಿಕರಿಗಾಗಿ ಬೇಡಿಕೆ  ಆ'ಆ' ಗಿಂತ ಅಧಿಕವಾಗಬಹುದು;  ಆ" ಆ" ಆಗಬಹುದು (ಚಿತ್ರ 1).

ಚಿತ್ರ-3

 ಆಗ ಕೂಲಿಯ ಮಟ್ಟ  ಔW". ಈ ಘಟ್ಟದಲ್ಲಿ ಸಂಸ್ಥೆಗಳು ನಷ್ಟ ಅನುಭವಿಸುತ್ತವೆ.  ತತ್ಫಲವಾಗಿ ಕೆಲವು ಸಂಸ್ಥೆಗಳು ಈ ಕೈಗಾರಿಕೆಯಿಂದ ನಿರ್ಗಮಿಸುತ್ತವೆ. ಕೂಲಿ  ಔW' ಗೆ ಹಿಂದಿರುಗುತ್ತವೆ.  ಇದು ಸಮತೋಲ ಸ್ಥಿತಿ. 
ಪರಿಪೂರ್ಣ ಸ್ಪರ್ಧೆಯ ಪರಿಸ್ಥಿತಿಯಲ್ಲಿ ದೀರ್ಘ ಕಾಲದಲ್ಲಿ ಶ್ರಮದ ಸೀಮಾಂತ ಮತ್ತು ಸರಾಸರಿ ಉತ್ಪಾದಕತೆಗೆ ಅದರ ಕೂಲಿ ಸಮವಾಗಿರುತ್ತದೆ.  ಚಿತ್ರ 3ರಲ್ಲಿ ತೋರಿಸಿರುವಂತೆ ಸೀಮಾಂತ ಉತ್ಪಾದಕತೆ ರೇಖೆ  (ಒP) ಮತ್ತು ಸರಾಸರಿ ಉತ್ಪಾದಕತೆ ರೇಖೆ (ಂP) ಇವು ಛೇದಿಸುವಲ್ಲಿ (P) ಕೂಲಿಯ ಮಟ್ಟ ಸ್ಥಾಪಿತವಾಗುತ್ತದೆ.  
  ಂP ಏರುಗಡೆಯಲ್ಲಿರುವಾಗ:  ಒP>ಂP.  ಂP ಇಳಿಗಡೆಯಲ್ಲಿರುವಾಗ ಒP<ಂP. ಸಮತೋಲಸ್ಥಿತಿಯಲ್ಲಿ  (P) : ಒP=ಂP.          									
		
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ                                                                                                        *